ಕಾರಾಗೃಹದಲ್ಲಿ ಶಿಕ್ಷಣ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಕಾರಾಗೃಹದ ಕಾರ್ಯನಿರ್ವಹಣೆ ಮೂರು ಬಗೆಯದು: ರಕ್ಷಣಾತ್ಮಕ, ಪ್ರತಿರೋಧಾತ್ಮಕ ಹಗೂ ಸುಧಾರಣಾತ್ಮಕ. ಅಪರಾಧಿಗೆ ಶಿಕ್ಷೆ ವಿಧಿಸುವುದೇ ಬಂಧನದ ಹಿನ್ನೆಲೆಯಲ್ಲಿ ಅಡಗಿರುವ ಮೂಲತತ್ತ್ವವಾದ್ದರಿಂದ ಕಾರಾಗೃಹವನ್ನು ಶಿಕ್ಷೆಯ ನಿವಾಸವೆಂದೂ ಅಪರಾಧವನ್ನು ಪ್ರೋತ್ಸಾಹಿಸದಂತೆ ತಡೆಗಟ್ಟುವ, ಜನರ ಆಸ್ತಿಪಾಸ್ತಿಯನ್ನು ರಕ್ಷಿಸುವ ಗೃಹವೆಂದೂ ಪರಿಗಣಿಸಲಾಗುತ್ತಿತ್ತು. ಆದರೆ ನಾಗರಿಕತೆ ಮುಂದುವರಿದಂತೆ ಬಂಧನದ ಹಿನ್ನೆಲೆಯ ತತ್ತ್ವಗಳೂ ಬದಲಾದವು. ಶಾಂತಿಗೆ ಭಂಗ ತರುವವರನ್ನು ಕೇವಲ ಶಿಕ್ಷಿಸುವುದಕ್ಕೆ ಬದಲು, ಅವರನ್ನು ಯೋಗ್ಯ ಪ್ರಜೆಗಳನ್ನಾಗಿ ಮಾಡುವ ಬಗ್ಗೆ ಈಚೆಗೆ ಹೆಚ್ಚಿನ ಗಮನ ಕೊಡಲಾಗುತ್ತಿದೆ. ಈ ಹೊಸ ಮಾರ್ಗ ಸುಭದ್ರವಾದ ಹಾಗೂ ವ್ಯಾಪಕ ಶಿಕ್ಷಣದ ವ್ಯವಸ್ಥೆಯನ್ನವಲಂಬಿಸಿದೆ. ಕಳ್ಳತನ, ಕೊಲೆಸುಲಿಗೆಗಳ ಮೂಲ ಬಹುತೇಕ ಅಶನವಸನಗಳ ಅಭಾವವೇ ಆಗಿರುವುದರಿಂದ ನಿರುದ್ಯೋಗದ ವಿರುದ್ಧ ಹಾಗೂ ರೋಗರುಜಿನಗಳ ವಿರುದ್ಧ ರಕ್ಷಣೆ ನೀಡುವುದರಿಂದ, ವೇತನದ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಜೀವನದ ಮಟ್ಟವನ್ನು ಹೆಚ್ಚಿಸಬೇಕು ಎಂಬ ಭಾವನೆ ಬೆಳೆಯುತ್ತಿದೆ. ಹೀಗೆ ಮಾಡಿದಲ್ಲಿ ಅಪರಾಧ ಮನೋಧರ್ಮ ಕ್ರಮೇಣ ಕಡಿಮೆಯಾಗುತ್ತದಲ್ಲದೆ ಸರಿಯಾದ ಶಿಕ್ಷಣದಿಂದ ಅಪರಾಧಿಗಳೂ ಕ್ರಮೇಣ ನಾಗರಿಕರಾಗುವ ಸಂಭವ ಹೆಚ್ಚುಹೆಚ್ಚಾಗಿ ತೋರುತ್ತಿದೆ.

 ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಸಲುವಾಗಿ ಹಾಗೂ ದುರಭ್ಯಾಸಿಗಳನ್ನು ತಿದ್ದಿ ಸರಿಪಡಿಸುವ ಸಲುವಾಗಿ ಇಂಗ್ಲೆಂಡಿನಲ್ಲಿ ಶಿಕ್ಷಾಗೃಹಗಳನ್ನು ಸ್ಥಾಪಿಸಲಾಯಿತು. ವೃತ್ತಿ, ಶಿಕ್ಷಣ ಹಾಗೂ ಧಾರ್ಮಿಕ ಉಪದೇಶಗಳ ಮೂಲಕ ಅಪರಾಧಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡುವುದೇ ಇಂಥ ಸಂಸ್ಥೆಗಳ ಮುಖ್ಯ ಉದ್ದೇಶವಾಗಿತ್ತು. ಸಿ. ಬಿ. ಬೆಕಾರಿಯಾ ಮತ್ತು ಹೋವರ್ಡ್‍ರಂಥ ಅನೇಕ ಸಮಾಜ ಸುಧಾರಕರು ತಮ್ಮ ಗ್ರಂಥಗಳ ಮೂಲಕ ಪ್ರಪಂಚದ ಕರ್ತವ್ಯಜ್ಞಾನವನ್ನು ಬಡಿದೆಬ್ಬಿಸಿದರು. ಶಿಕ್ಷೆಯಿಂದಲೇ ಜನ ಉತ್ತಮರಾಗುವುದಿಲ್ಲ, ಯೋಗ್ಯ ಶಿಕ್ಷಣದ ಮೂಲಕ ಅಪರಾಧಿಗಳನ್ನು ತಿದ್ದಬಹುದು ಎನ್ನುವುದನ್ನು ಅನುಭವ ತೋರಿಸಿಕೊಟ್ಟಿದೆ. ಕಾರಾಗೃಹಗಳ ಕಮಿಷನರ್ ಅಲೆಗ್ಸಾಂಡರ್ ಪ್ಯಾಟರ್‍ಸನ್ನನ ಪ್ರಯತ್ನಗಳಿಂದಾಗಿ ಅನೇಕ ಬದಲಾವಣೆಗಳಾದವು. ಕಾರಾಗೃಹ ಜೀವನದ ದುಃಸ್ಥಿತಿಯನ್ನು ತೊಡೆದುಹಾಕಲಾಯಿತು. ಸಮಾಜದಲ್ಲಿ ಉಪಯುಕ್ತ ಸ್ಥಾನವನ್ನು ಗಳಿಸಿಕೊಳ್ಳುವಂತೆ ಕೈದಿಗಳಿಗೆ ತರಬೇತು ನೀಡುವತ್ತ ಗಮನ ಹರಿಸಲಾಯಿತು. ಎಚ್ಚರಿಕೆಯಿಂದ ಆಯ್ದ ಸಿಬ್ಬಂದಿ ವರ್ಗದವರು ಶಿಕ್ಷಣ ಹಾಗೂ ಮನರಂಜನೆಯ ಬಗ್ಗೆ ಕೈದಿಗಳ ಮೇಲೆ ತಮ್ಮ ವೈಯಕ್ತಿಕ ಪ್ರಭಾವ ಬೀರಬೇಕೆಂದೂ ಸಮುದಾಯದ ಹೊರಗಿಂತ ಆಯಲಾದ ಸ್ತ್ರೀಪುರುಷರು ಸಮಾಜ ಸೇವೆಯನ್ನು ತಾವೇ ಸ್ವಇಚ್ಛೆಯಿಂದ ಮಾಡಬೇಕೆಂದೂ ಒತ್ತಿ ಹೇಳಲಾಗಿದೆ. ದ್ವಿತೀಯ ಮಹಾಯುದ್ಧಾನಂತರ ಅವಧಿಯಲ್ಲಿ ಇಂಗ್ಲಿಷ್ ಕಾರಾಗೃಹ ಸಾಕಷ್ಟು ಪ್ರಗತಿಯನ್ನು ಸಾಧಿಸಿತು. ಶಿಕ್ಷಣದ ಜೊತೆಗೆ ಗ್ರಂಥಾಲಯ ಸೇವೆಯನ್ನು ಅವಕ್ಕೆ ಸ್ಥಳೀಯ ವಿದ್ಯಾಧಿಕಾರಿಗಳು ದೊರಕಿಸಿಕೊಟ್ಟಿದ್ದಾರೆ.

 ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ದಂಡಸಂಸ್ಥೆ (ಪೀನಲ್ಲ ಇನ್‍ಸ್ಪಿಟ್ಯೂಷನ್) ರಾಜ್ಯಶಿಕ್ಷಣ ಇಲಾಖೆಗಳ ಹತೋಟಿಗೊಳಪಟ್ಟಂತೆ ಆರಂಭಿಕ ಶಿಕ್ಷಣವನ್ನು ಒದಗಿಸಿತು. ಹಿಂದಿನಿಂದಲೂ ಅಪರಾಧಿಗಳಿಗೆ ಶೈಕ್ಷಣಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ನೀಡಲಾಗುತ್ತಿತ್ತು. ಸಾಮಾನ್ಯ ವಯಸ್ಕರಿರುವ ಕಾರಾಗೃಹ ಶಾಲೆಗಳಲ್ಲಿ ತರಬೇತು ಪಡೆಯದ ಉಪಾಧ್ಯಾಯರು ಮಕ್ಕಳಿಗಾಗಿ ರಚಿತವಾದ ಪಠ್ಯಪುಸ್ತಕಗಳನ್ನೇ ಉಪಯೋಗಿಸಿ ಪಾಠ ಹೇಳಿಕೊಡುತ್ತಿದ್ದರು. ಸಾಮಾನ್ಯ ಶಿಕ್ಷಣಕ್ಕಿಂತಲೂ ವೃತ್ತಿಪರ ಶಿಕ್ಷಣದ ಮಟ್ಟ ಹೆಚ್ಚಿನದಾಗಿತ್ತು. ಹಲವು ಸಂಸ್ಥೆಗಳಲ್ಲಿ ಇದು ಔದ್ಯೋಗಿಕ ಹಾಗೂ ವ್ಯವಸಾಯ ಚಟುವಟಿಕೆಗಳಿಂದ ಕೂಡಿತ್ತು. ಕಾರಾಗೃಹಗಳಲ್ಲಿನ ಪುಸ್ತಕ ಭಂಡಾರ ದೈವಿಕ ಹಾಗೂ ಧಾರ್ಮಿಕ ಸಾಹಿತ್ಯದಿಂದ ತುಂಬಿ ಹೋಗಿತ್ತು. ಆದರೆ ಕಾರಾಗೃಹದಲ್ಲಿ ಅಲ್ಪ ಕಾಲಾವಧಿಯ ವರೆಗೆ ಇರುವ ಕೈದಿಗಳ ಶಿಕ್ಷಣದ ಬಗ್ಗೆ ಯಾವ ಅನುಕೂಲವೂ ಇರಲಿಲ್ಲ. ಕೈದಿಯನ್ನು ಸಮಾಜಯೋಗ್ಯನನ್ನಾಗಿ ಮಾಡುವ ಕಾರ್ಯವನ್ನು ಶೈಕ್ಷಣಿಕ ಕಾರ್ಯವೆಂದು ಭಾವಿಸಲಾಗಿತ್ತು. ಸ್ವೋಪಕ್ರಮದ ವಿಕಾಸ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಕೈದಿಯಲ್ಲಿ ಉಂಟುಮಾಡುವುದೇ ಈ ಕಾರ್ಯದ ಮುಖ್ಯೋದ್ದೇಶವಾಗಿತ್ತು. ಸೋವಿಯತ್ ಒಕ್ಕೂಟದ ವಿನಾ ಉಳಿದೆಲ್ಲ ರಾಷ್ಟ್ರಗಳಲ್ಲೂ ದಂಡನೆಯನ್ನು ಕೈಗೊಳ್ಳಬೇಕಾದಾಗಲೆಲ್ಲ ಧಾರ್ಮಿಕ ಬೋಧನೆ ಅಗತ್ಯವೆಂದು ಪರಿಗಣಿಸಲಾಗಿತ್ತು. 

 ಯುವಕರ ಮನಸ್ಸು ಅಪಕ್ವತೆಯಿಂದ ಕೂಡಿರುತ್ತದೆ. ಬಹು ಸುಲಭವಾಗಿ ಅದನ್ನು ಹೇಗೆ ಬೇಕಾದರೂ ತಿರುಗಿಸಬಹುದು. ತರುಣ ಅಪರಾಧಿಗಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯವಾಗುತ್ತದೆ. ಇವರನ್ನು ಹಿರಿಯ ಅಧಿಕಾರಿಗಳಿಂದ ಪ್ರತ್ಯೇಕಿಸಬೇಕಾಗುತ್ತದೆ. ಇವರನ್ನು ಹಿರಿಯರ ಮೇಲ್ವಿಚಾರಣೆಗೆ ಒಳಪಟ್ಟಂತೆ ರಿಮ್ಯಾಂಡ್ ಹೋಂನಲ್ಲಿ ಇಡುವುದು ವಾಡಿಕೆ. ತರುಣರಿಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ನೈತಿಕವಾಗಿ ಶಿಕ್ಷಣ ನೀಡಲು ಭಾರತದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವುದು ಬಾಸ್ರ್ಟಲ್ ಶಾಲೆಗಳು. ಬಾಸ್ರ್ಟಲ್ ಶಾಲೆಯ ವಾತಾವರಣ ಬಾಲಾಪರಾಧಿಗಳ ಸುಧಾರಣೆಗೆ ನೆರವಾಗುತ್ತದೆ. ಏಕೆಂದರೆ ಸಿಬ್ಬಂದಿ ವರ್ಗದವರೂ ನಿವಾಸಿಗಳೂ ಸಂತೋಷದಿಂದ ಹಾಗೂ ಶ್ರದ್ಧೆಯಿಂದ ಅಲ್ಲಿ ಕೆಲಸ ಮಾಡುತ್ತಾರೆ.

 ಬಾಸ್ರ್ಟಲ್ ಶಾಲೆಯಲ್ಲಿ ಕೆಲಸಕಾರ್ಯಗಳು ಕಾರಾಗೃಹಕ್ಕಿಂತಲೂ ಕಷ್ಟಕರವಾಗಿರುತ್ತವೆ. ಕಾರಣ ವ್ಯಕ್ತಿ ಅಲ್ಲಿ ದಿನದಲ್ಲಿ ಎಂಟು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇದರ ಜೊತೆಗೆ ಬೇರೆ ಬೇರೆ ವಿಷಯಗಳಲ್ಲಿ ಶಿಕ್ಷಣವನ್ನೂ ನೀಡಲಾಗುತ್ತದೆ. ಹುಡುಗರಿಗೆ ಕ್ರೀಡೆಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಏಕೆಂದರೆ ಅವರ ತರಬೇತಿಯಲ್ಲಿ ಇದು ಅತ್ಯಾವಶ್ಯಕ ಅಂಗವೆಂದು ಪರಿಗಣಿಸಲಾಗಿದೆ. ಕ್ರೀಡೆ ಒಂದು ರೀತಿಯ ಶಿಸ್ತನ್ನು, ಒಂದುಗೂಡಿ ಕೆಲಸ ಮಾಡುವುದನ್ನು, ಕಷ್ಟಪಟ್ಟು ಕೆಲಸ ಮಾಡುವುದನ್ನೂ ಸ್ವತಂತ್ರವಾಗಿ ಗೌರವವಾಗಿ ಬಾಳುವುದು ಹೇಗೆ ಎಂಬುದನ್ನೂ ಕಲಿಸಲಾಗುತ್ತದೆ.

 ಯಾವ ಸುಧಾರಣಾ ಶಾಲೆಯೂ ಯಶಸ್ಸಿನ ಬಗ್ಗೆ ನೂರಕ್ಕೆ ನೂರರಷ್ಟು ಭರವಸೆ ಕೊಡುವುದಿಲ್ಲ. ಅವರಲ್ಲಿ ಬಹುಮಂದಿ ಉತ್ತಮ ಪ್ರಜೆಗಳಾಗಿ ಪರಿವರ್ತಿತರಾದರೆ ಮುಖ್ಯೋದ್ದೇಶವನ್ನು ಸಾಧಿಸಿದಂತಾಗುವುದು. ಈ ವಿಷಯದಲ್ಲಿ ಯುನೈಟೆಡ್ ಕಿಂಗ್‍ಡಮಿನಲ್ಲಿ ಸೇ. 65 ರಿಂದ ಸೇ. 75ರಷ್ಟು ಯಶಸ್ಸನ್ನು ಸಾಧಿಸಲಾಗಿದೆ. ಭಾರತದಲ್ಲಿನ ಸಾಧನೆಯ ಬಗ್ಗೆ ನಿರ್ದಿಷ್ಟ ಅಂಕಿ ಅಂಶಗಳು ದೊರಕಿಲ್ಲ. ಈ ಸಂಸ್ಥೆಗಳಲ್ಲಿ ಮೊದಮೊದಲು ಸುಸ್ತಾಗುವಂಥ ಕೆಲಸವನ್ನೇ ಕೊಡಲಾಗುತ್ತದೆ. ಕ್ರೀಡೆಗೆ ಅವಕಾಶವಿರುವುದಿಲ್ಲ. ಹೊಸದಾಗಿ ಬಂದವರು ಉದ್ಧಟರಂತೆ ಕಂಡುಬರುತ್ತಾರಾದರೂ ತಮಗಿಂತ ಹಳಬರಾದ ಹುಡುಗರು ಸಂತೋಷದಿಂದ ಕೆಲಸ ಮಾಡುತ್ತಿರುವುದನ್ನು ಕಂಡು, ಸಿಬ್ಬಂದಿವರ್ಗ ತಮಗೆ ಅನುಕೂಲವಾಗಿರುವುದನ್ನು ಕಂಡು ಸಂಸ್ಥೆಯ ವಾತಾವರಣಕ್ಕೆ ಹೊಂದಿ ನಡೆಯಲಾರಂಭಿಸುತ್ತಾರೆ.

 ಚಿಕಿತ್ಸಾನಂತರದ ಆರೈಕೆಯ ಬಗ್ಗೆಯೂ ಹೆಚ್ಚಿನ ಗಮನ ನೀಡುವ ಕಾರ್ಯ ತರಬೇತಿ ಶಾಲೆಗಳ ಕಾರ್ಯಕ್ಕೆ ಪೂರಕವಾಗಬೇಕು. ಬಿಡುಗಡೆ ಹೊಂದಿದ ಬಾಲಕರಿಗೆ ಪ್ರಾಮಾಣಿಕ ಜೀವನವನ್ನು ನಡೆಸುವ, ಸತ್ಪ್ರಜೆಗಳಾಗುವ ಆಸೆ ಇರಬಹುದು. ಆದರೆ ಸಮಾಜಕ್ಕೆ ಪುನಃ ಮರಳಿ ಬಂದಾಗ ಅವರಿಗೆ ನೌಕರಿ ದೊರಕದಿದ್ದಲ್ಲಿ, ಒಳ್ಳೆಯ ಮನೆ ದೊರಕದಿದ್ದಲ್ಲಿ ಅವರಿಗಾಗಿ ಮಾಡಿದ ಒಳ್ಳೆಯ ಕಾರ್ಯವೆಲ್ಲವೂ ನಿಷ್ಪಲವಾಗುತ್ತದೆ. ಆದ್ದರಿಂದ ತರಬೇತಿ ಶಾಲೆಗಳಿಂದ ಬಿಡುಗಡೆ ಹೊಂದಿದ ಬಾಲಕರನ್ನು ನೋಡಿಕೊಳ್ಳಲು ದಾನಶೀಲ ಸಂಸ್ಥೆಗಳನ್ನು ಸ್ಥಾಪಿಸುವುದು ಅಗತ್ಯವಾಗುತ್ತದೆ.

 ಹೊಸ ವಿಧಾನದ ಮುಖ್ಯ ಲಕ್ಷಣ ಉಪಯುಕ್ತ ತರಬೇತಿಯನ್ನೇ ಅವಲಂಬಿಸಿದೆ. ಸಾಮಾನ್ಯವಾಗಿ ಆಸ್ತಿ ಲಪಟಾಯಿಸುವ ಅಪರಾಧಿಗಳು ಸೋಮಾರಿಗಳು. ಅವರಿಗೆ ಕೆಲಸ ಮಾಡಲು ಸ್ವಲ್ಪವೂ ಇಷ್ಟವಿರುವುದಿಲ್ಲ. ಹಾಗಾಗಿ ಅವರಿಗೆ ದೈನಂದಿನ ಶ್ರಮದ ಕೆಲಸಕಾರ್ಯಗಳನ್ನು ಹೇಗೆ ಮಾಡಬೇಕೆಂಬುದನ್ನು ಕಲಿಸುವುದೇ ಮೊದಲ ಹೆಜ್ಜೆಯಾಗಿದೆ. ಒಮ್ಮೆ ಒಬ್ಬ ವ್ಯಕ್ತಿ ಪ್ರಾಮಾಣಿಕವಾಗಿ ದೈನಂದಿನ ಕೆಲಸವನ್ನು ಮಾಡಲು ಕಲಿತನೆಂದರೆ ಸುಧಾರಣೆಯ ಅರ್ಧ ಹೋರಾಟವನ್ನು ಗೆದ್ದಂತೆಯೆ ಸರಿ. ಆರಂಭದಲ್ಲಿ ಕೆಲಸ ಶ್ರಮದಿಂದ ಕೂಡಿರುವಂತಿರಬೇಕು. ಆತನಲ್ಲಿ ಕೆಲಸದ ಬಗ್ಗೆ ಪವಿತ್ರ ಭಾವನೆಯನ್ನು ಹುಟ್ಟಿಸುವುದೇ ಅತ್ಯಂತ ಅಗತ್ಯದ ಕಾರ್ಯವಾಗುತ್ತದೆ.

 ಭಾರತೀಯ ಕಾರಾಗೃಹಗಳಲ್ಲಿ ಅನಕ್ಷರತೆ ಬಹು ಪ್ರಮಾಣದಲ್ಲಿರುವುದರಿಂದ ಅದು ಯಾವ ಬಗೆಯ ಮುನ್ನಡೆಗೂ ಅತ್ಯಂತ ತೊಡಕಾಗಿ ಪರಿಣಮಿಸಿದೆ. ಕಲಿಯಲು ಸಮರ್ಥರಾಗಿರುವ ಎಲ್ಲ ತರುಣರಿಗೂ ಸರಳ ಪ್ರಾಥಮಿಕ ಶಿಕ್ಷಣವನ್ನು ಮೊದಲು ನೀಡಬೇಕು. ಸ್ಥಳೀಯ ಇತಿಹಾಸ ಮತ್ತು ಭೂಗೋಳದ ಸಾಮಾನ್ಯ ಜ್ಞಾನ ಅವರಿಗೆ ಅಗತ್ಯ. ಅಂಥ ಮೂಲಭೂತ ಶಿಕ್ಷಣ ಸುಧಾರಣೆಯ ಬಗ್ಗೆ ಪ್ರಭಾವ ಬೀರಲು ಮತ್ತಷ್ಟು ಸಹಾಯಕವಾಗುತ್ತದೆ. ಒಬ್ಬ ವ್ಯಕ್ತಿ ಓದಲು ಬರೆಯಲು ಸಮರ್ಥನಾದಾಗ ಆತ ಆರಿಸಿದ ಗ್ರಂಥಗಳನ್ನು ತಾನೇ ಓದಿ ತನ್ನ ವಿದ್ಯೆಯನ್ನು ಹೆಚ್ಚಿಸಿಕೊಳ್ಳು ಅವಕಾಶ ಮಾಡಿಕೊಡಬಹುದು. ಅಧಿಕಾರಿಗಳಿಂದ ಹಾಗೂ ಅಧಿಕಾರೇತರರಿಂದ ಏರ್ಪಡಿಸುವ ಉಪನ್ಯಾಸಗಳು ಅಂಥ ಶೈಕ್ಷಣಕ ಶಿಕ್ಷಣಕ್ಕೆ ಪೂರಕವಾಗಬಲ್ಲವು.

 ಅಪರಾಧಿಯನ್ನು ದೃಢಕಾಯನನ್ನಾಗಿ ಇಡುವುದು ಅಗತ್ಯ. ಇದರಿಂದಾಗಿ ಆತನ ಬುದ್ಧಿ ಉಲ್ಲಾಸಕರವಾಗಿಯೂ ಜಾಗೃತವಾಗಿಯೂ ಆಗುತ್ತದೆ. ಅಪರಾಧಿಗಳಿಗಾಗಿ ವ್ಯವಸ್ಥಿತ ಹೊರಾಂಗಣ ಕ್ರೀಡೆಗಳ ಜೊತೆಗೆ ದೈಹಿಕ ತರಬೇತಿಯನ್ನು ಒಳಗೊಂಡಂತೆ ಒಂದು ವ್ಯವಸ್ಥೆಯನ್ನು ರೂಪಿಸುವುದು ಒಳ್ಳೆಯದು. ಪ್ರಾಮಾಣಿಕ ಕೆಲಸ ಹಾಗೂ ಆರೋಗ್ಯದಿಂದ ಕೂಡಿದ ಹೊರಾಂಗಣ ವ್ಯಾಯಾಮದಿಂದ ಬಳಲಿದ ಅಪರಾಧಿಗಳು ತಂಟೆ ಮಾಡುವುದಿಲ್ಲ. ಇಂಥ ಕಡೆಗಳಲ್ಲಿ ಹೆಚ್ಚು ಗಲಭೆಗಳಾಗವು.

 ಅಪರಾಧಿಗಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಇನ್ನೊಂದು ಅಪೇಕ್ಷಣೀಯ ಸುಧಾರಣೆ. ಒಳ್ಳೆಯ ನಡತೆ ಹಾಗೂ ಔಚಿತ್ಯಜ್ಞಾನವಿರುವಂಥವರು ಮಾತ್ರ ಬೋಧನೆಯ ಕೆಲಸಕ್ಕೆ ಯೋಗ್ಯರು. ಧಾರ್ಮಿಕ ಕ್ಷೇತ್ರದಲ್ಲಿ ಗಣ್ಯರಾದವರು ಆಗಾಗ ಬಂದು ಅಪರಾಧಿಗಳೊಡನೆ ಸಂಭಾಷಣೆ ನಡೆಸುವಂತೆ ಏರ್ಪಾಟು ಮಾಡಬಹುದು. ಅಪರಾಧಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಮಾನ್ಯ ಕಾರಾಗೃಹ ವಿಧಾನಗಳು ವಿಫಲಗೊಂಡಾಗ ಪುರೋಹಿತವರ್ಗದವರ ಪ್ರೇರಣೆಯಿಂದಾಗಿ ಅದ್ಭುತ ಫಲಗಳು ದೊರೆತಿವೆ ಎಂಬುದನ್ನು ಕಾರಾಗೃಹ ಅಧಿಕಾರವರ್ಗದವರು ಮನಗಂಡಿದ್ದಾರೆ. ರಾಷ್ಟ್ರದ ಪ್ರತಿಯೊಂದು ಕಾರಾಗೃಹದಲ್ಲೂ ಕೊನೆಯ ಪಕ್ಷ ಒಬ್ಬ ಪುರೋಹಿತ ಇರುವುದು ಒಳ್ಳೆಯದು. ಅಂಥವರ ಸಾನ್ನಿಧ್ಯ ಗಂಭೀರ ಪ್ರಭಾವವನ್ನು ಬೀರುತ್ತದೆ.

 ಕಾರಾಗೃಹ ಸಿಬ್ಬಂದಿ ವರ್ಗಕ್ಕೂ ಪುರೋಹಿತ ವರ್ಗಕ್ಕೂ ನಡುವೆ ನಿಕಟ ಸಹಕಾರವಿರಬೇಕು. ಅಪರಾಧಿಗಳ ಆಧ್ಯಾತ್ಮಿಕ ತರಬೇತಿಯ ವಿಷಯದಲ್ಲಿ ಸಿಬ್ಬಂದಿ ವರ್ಗಕ್ಕೆ ನಂಬಿಕೆಯಿರಬೇಕು. ಅವರು ಪುರೋಹಿತ ವರ್ಗದವರನ್ನು ಗೌರವಿಸಬೇಕು. ಇದಕ್ಕೆ ಪ್ರತಿಯಾಗಿ ಅಪರಾಧಿಗಳು ಅವರನ್ನು ಗೌರವಿಸುತ್ತಾರೆ. ಭಾರತದಲ್ಲಿ ಅಸಂಖ್ಯಾತ ಧರ್ಮಗಳಿರುವುದರಿಂದ ಈ ಸಮಸ್ಯೆ ಜಟಿಲವಾಗಿದೆ. ಆದಷ್ಟುಮಟ್ಟಿಗೆ ಪ್ರತಿಯೊಂದು ವರ್ಗದವರ ಅಗತ್ಯಗಳನ್ನು ಪೂರೈಸುವ ಪ್ರಯತ್ನ ಕೈಗೊಳ್ಳಬೇಕು.

  ವೃತ್ತಿಸಂಬಂಧವಾದ ತರಬೇತಿಯಂತೂ ಅಗತ್ಯವೆಂದು ಹಿಂದೆಯೇ ಹೇಳಿದೆ. ಅಲ್ಲದೆ ಕಾರಾಗೃಹದಲ್ಲಿ ಅನೇಕ ಉದ್ದಿಮೆಗಳನ್ನು ವ್ಯವಸ್ಥೆಗೊಳಿಸಬೇಕು. ಕ್ರಮೇಣ ಅವು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಬೇಕು. ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸರ್ಕಾರೀ ಇಲಾಖೆಗಳ ಸಹಕಾರವನ್ನು ಪಡೆಯಬೇಕು. ಬೆಂಗಳೂರು, ಮೈಸೂರುಗಳ ಕೇಂದ್ರ ಕಾರಾಗೃಹಗಳಲ್ಲಿ ವೃತ್ತಿಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ಕೈದಿಗಳೇ ನೆಯ್ದ ಜಮಖಾನೆ, ಟವಲು, ಹೊದಿಕೆ, ಚಾಪೆ ಮುಂತಾದುವನ್ನು ವಸ್ತು ಪ್ರದರ್ಶನಗಳಲ್ಲಿ ಇಂದಿಗೂ ನೋಡಬಹುದು.

 ಅಪರಾಧಿಗಳ ಶಿಕ್ಷಣ ವ್ಯಾಪಕವೂ ಸುಸ್ಥಿತವೂ ಆಗಿರಬೇಕೆಂಬ ಬಗ್ಗೆ ಏಕಾಭಿಪ್ರಾಯವಿದೆ. ವಾಸ್ತವವಾಗಿ ಇಳಿಮುಖವಾಗುತ್ತಿರುವ ಅಪರಾಧ ಹಾಗೂ ಅಪರಾಧಿಗಳ ಸಂಖ್ಯೆಯ ಮೇಲೆ ನಮ್ಮ ನಾಗರಿಕತೆಯ ಗುಣವನ್ನು ಅಳೆಯಲಾಗುತ್ತದೆ. ಅಪರಾಧಿಗಳ ಬಗ್ಗೆ ನಡೆದುಕೊಳ್ಳುವಾಗ ನಾವು ಮಾನವೀಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ವ್ಯಕ್ತಿಯಲ್ಲಿ ಪ್ರಬಲ ಪ್ರತಿರೋಧವನ್ನು ತುಂಬಿ ಅಪರಾಧದ ರೋಗವನ್ನು ಗುಣಪಡಿಸುವುದು ಸಮಾಜದ ನೈತಿಕ ಹೊಣೆಯಾಗಿದೆ. ಅಪರಾಧಿ ಸಮಾಜದ ಸದಸ್ಯ ಎಂಬ ನಂಬಿಕೆಯ ಮೇಲೆ ಸುಧಾರಣೆಯ ಅಡಿಪಾಯ ನಿಂತಿದೆ. ಸಮಾಜದ ದೋಷಗಳ ಪರಿಣಾಮವಾಗಿ ಬಾಲಾಪರಾಧ ಉಂಟಾಯಿತೆನ್ನುವುದನ್ನು ಇಂದಿನ ನಮ್ಮ ವಿಶಾಲ ಜ್ಞಾನ ತೋರಿಸಿಕೊಟ್ಟಿದೆ. ಪರಿಸರಣ, ಕೆಟ್ಟ ಶಿಕ್ಷಣ, ನಮ್ಮ ಹಳ್ಳಿಗಳ ನಗರಗಳ ಸ್ಥಿತಿಗತಿಗಳು, ತಂದೆತಾಯಿಗಳು ತಮ್ಮ ಮಕ್ಕಳನ್ನು ಸಾಕಷ್ಟು ರೀತಿಯಲ್ಲಿ ಹತೋಟಿಯಲ್ಲಿಟ್ಟುಕೊಳ್ಳದೇ ಇರುವುದು-ಇವೇ ಮೊದಲಾದವು ತರುಣ ಅಪರಾಧಿಗಳಿಗೆ ಎಡೆ ಮಾಡಿಕೊಟ್ಟಿವೆ. ಹಾಗಾಗಿ ತರುಣ ಅಪರಾಧಿಗಳಲ್ಲಿ ಬಹುಮಂದಿ ಸರ್ಕಾರದಿಂದ, ಸಮಾಜದಿಂದ ಉದ್ಧಾರವಾಗಬೇಕಾಗಿದ್ದಾರೆ.           

(ಕೆ.ಬಿ